ಪೋಸಿಡನ್ -
ಗ್ರೀಕ್ ಪುರಾಣದ ಸಮುದ್ರ ದೇವತೆ ಅಥವಾ ಜಲದೇವತೆ. ರೋಮನರು ಇವನನ್ನು ಸಮುದ್ರದೇವತೆ ನೆಪ್ಟ್ಯೂನ್‍ನೊಂದಿಗೆ ತಾದಾತ್ಮ್ಯಗೊಳಿಸಿದ್ದಾರೆ, ಪೋಸಿಡನ್ ಎಂಬ ಪದಕ್ಕೆ ಭೂ ಪತಿ ಅಥವಾ ಭೂ ಒಡೆಯ ಎಂದು ಅರ್ಥ. ಸಾಂಪ್ರದಾಯಿಕವಾಗಿ ಕ್ರೋನಸ್ ಮತ್ತು ಫಲಶಕ್ತಿ ದೇವತೆಯಾದ ರೀಅಳ ಮಗ. ಸೂóóಸ್ ಮತ್ತು ಹೇಡಿಸ್ ದೇವತೆಗಳ ಸಹೋದರ. ಇವರು ತಂದೆಯನ್ನು ಪದಚ್ಯುತಗೊಳಿಸಿದಾಗ ಸಮುದ್ರಾಧಿಪತ್ಯ ಈತನಿಗೆ ಬಂತೆಂದು ಪ್ರತೀತಿ. ಈತನನ್ನು ಮೂಲತಃ ಅಯೋನಿಯನ್ನರು ಪೂಜಿಸುತ್ತಿದ್ದಿರಬಹುದೆಂದೂ ಕ್ರಮೇಣ ಅದು ಹೆಲೆನಿಕ್ ಸಂಸ್ಕøತಿ ಕಾಲದಲ್ಲಿ ಗ್ರೀಸನ್ನು ಪ್ರವೇಶಿಸಿತೆಂದೂ ಅಭಿಪ್ರಾಯವಿದೆ.

	ಈತ ಸಮುದ್ರ ದೇವತೆಯಾಗಿರುವುದರ ಜೊತೆಗೆ ಭೂಕಂಪಗಳ ದೇವತೆಯೂ ಆಗಿದ್ದಾನೆ. ಸಿಹಿನೀರಿನ ಬುಗ್ಗೆಗಳು ಮತ್ತು ಕುದುರೆಗಳ ಉತ್ಪತ್ತಿ - ಇವಕ್ಕೂ ಈ ದೇವತೆಗೂ ಸಂಬಂಧಕಲ್ಪಿಸಲಾಗಿದೆ. ಈತ ಮಡೂಸಾ ಎಂಬ ರಾಕ್ಷಸಿಯಲ್ಲಿ ಜನಿಸಿದ ಪೆಗಸಸ್ ಎಂಬ, ರೆಕ್ಕೆಗಳ್ಳುಳ ಕುದುರೆಯ ಪಿತೃ. ಈತನ ಸಂತಾನಗಳಲ್ಲಿ ಹೆಚ್ಚಿನವು ದೈತ್ಯರುಗಳಾಗಿದ್ದು, ದುಷ್ಟಶಕ್ತಿಗಳಾಗಿದ್ದವು. ಈತನ ಸ್ವಭಾವದಲ್ಲೂ ಉಗ್ರತೆಯೇ ಪ್ರಧಾನ. ಕುದುರೆಗಳನ್ನು ಸಾಕುವ ಕಲೆಯನ್ನು ಮಾನವರಿಗೆ ಕಲಿಸಿದ್ದು ಈತನೆ ಎಂದು ನಂಬಿಕೆ. ಈತನ ಆಯುಧ ತ್ರಿಶೂಲ. ಡಾಲ್ಫಿನ್ ಮತ್ತು ಟನೀ ಮೀನುಗಳು ಇವನ ಲಾಂಛನಗಳು. ವಾಸಸ್ಥಾನ ಈಜಿಯನ್ ಸಮುದ್ರತೀರದಾಚೆಯ ಯೂಬೀಯ ಸಾಗರತಳದಲ್ಲಿ. 

	ಗ್ರೀಸಿನ ವಿವಿಧ ಎಡೆಗಳಲ್ಲಿ ಈ ದೇವತೆಯ ಪೂಜಾಸ್ಥಾನಗಳಿವೆ. ಆತೆನ್ಸಿನ ಸಾರ್ವಭೌಮ ದೇವತೆಯ ಸ್ಥಾನಕ್ಕೆ ಅತೀನ ದೇವತೆಯೊಂದಿಗೆ ಹೋರಾಡಿ ಸೋತನೆಂದು ಪೌರಾಣಿಕ ಉಲ್ಲೇಖವಿದೆ. ಆದರೆ, ಅಲ್ಲೂ ಈತನನ್ನು ಪೂಜಿಸಲಾಗುತ್ತದೆ. ಈ ಕೆಲವು ಗ್ರೀಕ್ ರಾಜವಂಶಗಳಿಗೆ ಈತನೇ ಮೂಲ ಪುರುಷನೆಂದು ಹೇಳಿರುವುದುಂಟು. ಈ ದೇವತೆಗೆ ಸೂóಸ್‍ನಷ್ಟು ಪ್ರಮುಖ ಸ್ಥಾನವಿಲ್ಲ. ಕಾರಿಂತಿನ ಭೂಸಂಧಿಯ ಬಳಿ ಇವನ ಹೆಸರಿನಲ್ಲಿ ಮುಖ್ಯ ಉತ್ಸವ ನಡೆಸಲಾಗುತ್ತಿತ್ತು.

	ಗ್ರೀಕ್ ಶಿಲ್ಪಕಲೆಯಲ್ಲಿ ಈ ದೇವತೆಯ ವಿಗ್ರಹವನ್ನು ಕಾಣಬಹುದು. 
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ